ಹೋಮಿಯೋಪಥಿ ಸಿದ್ಧಾಂತಗಳ ಪ್ರಕಾರ ನಮ್ಮ ದೇಹದಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ಹೊರಗಿನ ಕಾರಣಗಳಿಂದ ಮಾತ್ರ ಅಲ್ಲ. ನಿಸರ್ಗದತ್ತ ಕಾಯಿಲೆಗಳು (natural diseases) ನಮ್ಮ ಜೀವ ಚೈತನ್ಯ ಶಕ್ತಿಯ ಕುಂದುವಿಕೆಯಿಂದ ಉಂಟಾಗುತ್ತವೆ. ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಜೀವ ಚೈತನ್ಯ ಶಕ್ತಿ ಕುಂಠಿತಗೊಳ್ಳುವುದು ಹೇಗೆ? ಇದು ಯಾವ ರೀತಿಯ ಪರಿಕಲ್ಪನೆ ? ಯಾವ ರೀತಿಯ ಸಮಸ್ಯೆ ಉಂಟಾದರೂ ಅದಕ್ಕೆ ಅದರದೇ ಆದ ಪರಿಹಾರ ಇದೆ.ಇದು ನಿಸರ್ಗನಿಯಮ. ಯಾವುದರಲ್ಲಿಯು ನಾವು ವಿಶೇಷ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದು ನಮ್ಮ ಮನಸಿನ ಅನಿಸಿಕೆ ಮಾತ್ರ. ಯಾವ ವ್ಯಕ್ತಿಯಾದರೂ ತನ್ನ ವೈಜ್ಞಾನಿಕ ಚಿಂತನೆಯಿಂದ, ಅತ್ಯಾಧುನಿಕ ತಂತ್ರ ಜ್ಞಾನದಿಂದ ಕಾಯಿಲೆಗಳ ಕಾರಣವನ್ನು ಕಂಡುಹುಡುಕಿದ್ದೇನೆ ಮತ್ತು ಅದಕ್ಕೆ ಪ್ರತಿಯಾಗಿ ಔಷಧವನ್ನು ಸಂಶೋಧಿಸಿದ್ದೇನೆ , ಅದರಿಂದ ಈ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗುತ್ತದೆ ಎನ್ನುವ ಧೋರಣೆ ಬಾಲಿಶ.
ರೋಗದ ಮೂಲ ವ್ಯಕ್ತಿಯಲ್ಲಿಯೇ ಇದೆ. ಏಕೆಂದರೆ ರೋಗ ವ್ಯಕ್ತಿಯಲ್ಲಿ ತೋರ್ಪಡಿಸುತ್ತದೆ, ಹೊರಗೆ ಅಲ್ಲ ಅಥವಾ ಬೇರೆಯವರಲ್ಲೂ ಅಲ್ಲ. ಇದು ವ್ಯಕ್ತಿಗತ ಜೀವಚೈತನ್ಯಶಕ್ತಿಯ ಅಸಮತೋಲನೆ. ಜೀವ ಚೈತನ್ಯ ಶಕ್ತಿಯು ಸಮತೋಲನೆಯಲ್ಲಿದ್ದರೆ ಈ ದೇಹವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀವನದ ಸಾರ್ಥಕ್ಯದೆಡೆಗೆ ಮುನ್ನಡೆಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ತನ್ನದೇ ಆದ ಆದರ್ಶಗಳನ್ನೊಳಗೊಂಡ ಗುರಿಯನ್ನು ಹೊಂದಿರುತ್ತಾನೆ. ಮತ್ತು ಅದನ್ನು ಸಾಧಿಸಲು ಈ ದೇಹ ಮತ್ತು ಮನಸ್ಸನ್ನು ಕೇಂದ್ರಿಕರಿಸುತ್ತಾನೆ. ಆದರೆ ಮನಸ್ಸು ಮತ್ತು ದೇಹದ ಸಮತೋಲನೆ ಜೀವ ಚೈತನ್ಯ ಶಕ್ತಿಯನ್ನು ಅವಲಂಬಿಸಿದೆ. ಜೀವಚೈತನ್ಯಶಕ್ತಿಯ ರಹಿತ ಈ ದೇಹ ಮತ್ತು ಮನಸ್ಸು ನಿಸ್ತೇಜವಾಗಿರುತ್ತದೆ
ಜೀವಚೈತನ್ಯಶಕ್ತಿಯ ಸಿದ್ದಾಂತ ( Vital Force Theory ) ಹೋಮಿಯೋಪಥಿಯ ಜನಕ ಡಾ.ಸಾಮ್ಯುಯಲ್ ಹಾನ್ನೆಮನ್ನರು ಪ್ರತಿಪಾದಿಸಿದ ಪರಿಕಲ್ಪನೆ. ಇದರ ಭದ್ರ ಬುನಾದಿಯ ಮೇಲೆ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ಆರೋಗ್ಯ, ಖಾಯಿಲೆ ಮತ್ತು ಗುಣಮುಖತೆಯು ಅವಲಂಬಿತವಾಗಿದೆ. ಯಾವುದೇ ಮಾನಸಿಕ ಅಥವಾ ದೈಹಿಕ ಅಸಮತೋಲನೆ ಕಂಡು ಬಂದಾಗ ಅದು ಆಯಾಯ ವ್ಯಕ್ತಿಯ ಹಿನ್ನೆಲೆಯನ್ನು ಅವಲಂಬಿಸಿ ಪ್ರತಿಸ್ವರೂಪದ ಚಿನ್ಹೆಗಳಾಗಿ ದೇಹದ ದುರ್ಬಲ ಅಂಗಕ್ಕೆ ಸೋಂಕಿ ಹೊರನೋಟಕ್ಕೆ ಕಾಣಬರುತ್ತದೆ. ಇದನ್ನು ನಾವು ಇಂದಿನ ವೈಜ್ನಾನಿಕ ಯುಗದಲ್ಲಿಆವಿಷ್ಕರಿಸಲ್ಪಟ್ಟ ಯಾವುದೇ ಖಾಯಿಲೆಯ ಹೆಸರಿನಿಂದ ಗುರುತಿಸಬಹುದು. ಏಕೆಂದರೆ ಸೂಕ್ಷ್ಮಾಣು ಪರಿಕಲ್ಪನೆ ಅಂದಿನ ದಿನಗಳಲ್ಲಿ ಇರಲ್ಲಿಲ್ಲ. ಆದರೂ ಹಾನ್ನೆಮನ್ನರು ತಮ್ಮ ಅಲೋಚನಾ ಗ್ರಂಥದಲ್ಲಿ ಮತ್ತು ಧೀರ್ಘವ್ಯಾಧಿಗಳ ಸಿದ್ದಾಂತ ಎಂಬ ಗ್ರಂಥಗಳಲ್ಲಿ ಸೂಕ್ಷ್ಮಾಣುಗಳ ಪರಿಕಲ್ಪನೆಯನ್ನು ಮಂಡಿಸಿದ್ದಾರೆ. ಸೂಕ್ಷ್ಮಾಣು ( microbe) ಗಳ ಕಾರಣದಿಂದ,ಪರಿಸರದ ಅಕಾಲಿಕ ಬದಲಾವಣೆಗಳಿಂದ ಕೆಲವು ಶೀಘ್ರವ್ಯಾಧಿಗಳು ಮಾನವ ಕುಲವನ್ನು ಕಾಡುತ್ತವೆ. ಅವುಗಳು ಶೀಘ್ರವಾಗಿ ಮೊದಲ್ಗೊಂಡು ನಿರ್ದಿಷ್ಟ ಸಮಯವನ್ನು ಕಳೆದು ತದನಂತರ ತನ್ನಿಂತಾನೆ ವ್ಯಕ್ತಿಯ ಸುಸ್ಥಿತಿಗೆ ಬಂದು ಅಥವಾ ಮರಣದೊಂದಿಗೆ ಮುಕ್ತಾಯಗೊಳ್ಳುತ್ತವೆ. ಇಲ್ಲಿ ಚಿಕಿತ್ಸೆಗೆ ವಿಶೇಷ ಮಹತ್ವವಿಲ್ಲ. ಔಷಧಿ ಕೊಟ್ಟರೂ ಕೊಡದಿದ್ದರೂ ವ್ಯಕ್ತಿಯು ಸುಸ್ಥಿತಿಗೆ ಅಥವಾ ಮರಣಹೊಂದುವ ಪರಿಸ್ಥಿತಿಗೆ ಎದುರಾಗುವನು. ಈದನ್ನು ಗೌಪ್ಯವಾಗಿರುವ ಸೊರಾ (ತುರಿಕೆ ಐಬು) ದ ಕ್ಷಣಿಕ ಸ್ಫೋಟದಿಂದ ಉಂಟಾಗುತ್ತದೆ ಎಂಬುದಾಗಿ ಉಲ್ಲೇಖವಿದೆ. ಆದುದರಿಂದ ವ್ಯಕ್ತಿಯಲ್ಲಿ ಉಂಟಾಗುವ ಯಾವುದೇ ಅನಾರೋಗ್ಯದಲ್ಲಿ ಅವನ ಜೀವಚೈತನ್ಯಶಕ್ತಿಯ ಅಸ್ಥಿತ್ವ ಕಂಡುಬರುತ್ತದೆ.
ತಾರ್ಕಿಕವಾಗಿ ಹೇಳುವುದಾದರೆ ವ್ಯಕ್ತಿಯ ಜೀವಚೈತನ್ಯಶಕ್ತಿಯು ಹುಟ್ಟಿನಿಂದ ಅಂತ್ಯದ ವರೆಗೆ ತನ್ನ ಸಂಪೂರ್ಣ ಅವಧಿಯನ್ನು ಒಂದು ಭೌತಿಕ ದೇಹದಲ್ಲಿ ಕಳೆಯುತ್ತದೆ. ಸಮಯ ಕಳೆದಂತೆ ಅದು ತನ್ನ ಶಕ್ತಿಯನ್ನು ವ್ಯಯಿಸಿಕೊಂಡು ತನ್ನಿಂತಾನೆ ವಿಲೀನಗೊಳ್ಳುತ್ತದೆ. ಒಬ್ಬೊಬ್ಬ ವ್ಯಕ್ತಿಯಲ್ಲಿ ವಿವಿಧ ಅವಧಿಗಳಲ್ಲಿ ತನ್ನ ಅಸ್ಥಿತ್ವವನ್ನು ಕಂಡುಕೊಳ್ಳುತ್ತದೆ. ಇದು ಅವರವರು ಪಡೆದುಕೊಂಡು ಬಂದಂತಹ ವಂಶವಾಹಿನಿಪ್ರಕ್ರಿಯೆಯಂತೆ ವ್ಯಯಿಸಲ್ಪಡುತ್ತದೆ. ಆದುದರಿಂದ ಕೆಲವರು ಯಾವುದೋ ಕ್ಷುಲ್ಲಕ ರೋಗಕಾರಣಗಳಿಂದ ಬಳಲುತ್ತಾ ಜೀವನ ಪರ್ಯಂತ ಇರುತ್ತಾರೆ. ಅವರ ದೇಹದಲ್ಲಿ ಕಂಡುಬಂದಂತಹ ರೋಗ ಚಿನ್ಹೆಗಳಿಗೆ ಸಮಗುಣವುಳ್ಳ, ಐಬಿಗೆ ಪ್ರತಿರೋಧಕ (antimiasmatic) ಹೋಮಿಯೋಪಥಿ ಔಷಧಿಯನ್ನು ಪ್ರಯೋಗಿಸಿದಾಗ ಜೀವಚೈತನ್ಯಶಕ್ತಿಯು ಪುನಶ್ಚೇತನಗೊಂಡು ರೋಗರಹಿತವಾಗಿ ತನ್ನ ದೈನಂದಿನ ಕಾರ್ಯಕ್ರಮಗಳನ್ನು ಸುಸೂತ್ರವಾಗಿ, ಸಾಂಗವಾಗಿ ಮುಂದುವರಿಸಿಕೊಂಡು ಜೀವನದಲ್ಲಿ ಉನ್ನತ ಆಕಾಂಕ್ಷೆಗಳನ್ನು ಅಥವಾ ಧ್ಯೇಯಗಳನ್ನು ಈಡೇರಿಸಲು ಸಹಕರಿಸುತ್ತದೆ.