ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಯುಗದಲ್ಲಿ ಮತ್ತು ಕಾಯಿಲೆಗಳ ವಿರಾಟಸ್ವರೂಪದರ್ಶನ ಸಂದರ್ಭಗಳಲ್ಲಿಯೂ ಹೋಮಿಯೋಪಥಿ ತನ್ನದೇ ಆದ ಶೈಲಿಯಲ್ಲಿ ರೋಗನಿವಾರಕ ಮತ್ತು ರೋಗಮುಕ್ತಗೊಳಿಸುವ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಹೋಮಿಯೋಪಥಿ ಚಿಕಿತ್ಸೆಯು ಎಲ್ಲಾ ತರಹದ ರೋಗಸ್ಥಿತಿಗಳಲ್ಲಿ ಗುರುತಿಸಲ್ಪಟ್ಟಿದ್ದರೂ ಮಕ್ಕಳಲ್ಲಿ ವಿಶೇಷತ: ಪರಿಣಾಮಕಾರಿ ಎಂಬುದು ಜನಸಾಮಾನ್ಯರ ಅನಿಸಿಕೆ. ಮಕ್ಕಳಲ್ಲಿ ಕಲ್ಮಶರಹಿತ ಅಥವ ಕನಿಷ್ಠ ಕಲ್ಮಶ ಪ್ರಕೃತಿ ಇರುವುದರಿಂದ ರೋಗಚಿನ್ಹೆಗಳು ನೈಜಸ್ವರೂಪದಲ್ಲಿ ಕಂಡುಬರುತ್ತವೆ.
ವಾತಾವರಣದಲ್ಲಿಯ ಯಾವುದೇ ತರಹದ ಬದಲಾವಣೆಯು ಮಕ್ಕಳ ಚರ್ಮದ ತುರಿಕೆ, ಉರಿ,ಕೆಂಪಾಗುವಿಕೆ,ಊದುವಿಕೆ, ದ್ರವಸ್ರವಿಸುವಿಕೆ, ಬೊಕ್ಕೆಗಳೆದ್ದು ರಿಶಿಯಾಗುವಿಕೆ ಮುಂತಾದ ತೊಂದರೆಗಳನ್ನು ಉಂಟುಮಾಡುತ್ತದೆ. ಇವು ಸರ್ವೇ ಸಾಮಾನ್ಯ ಎಲ್ಲಾ ಮಕ್ಕಳಲ್ಲೂ ಕಂಡುಬರುತ್ತದೆ. ಮತ್ತು ತನ್ನಿಂತಾನೆ ಗುಣಮುಖವಾಗುತ್ತವೆ. ಉದಾಹರಣೆಗೆ ಕೋರ ( measles),ಸೀತಾಳೆ ಸಿಡುಬು( chicken pox) ಇತ್ಯಾದಿ. ಆದರೆ ಕೆಲವು ಮಕ್ಕಳಲ್ಲಿ ಪೂರ್ವಜರ ಹಿನ್ನೆಲೆಯಲ್ಲಿರುವ ಖಾಯಿಲೆಗಳ ಇರುವಿಕೆಯಿಂದ ಈ ತೊಂದರೆಗಳು ದೀರ್ಘವ್ಯಾಧಿ ಸ್ಥಿತಿಯನ್ನು ತಲಪುತ್ತವೆ. ಇವುಗಳ ಮೂಲ ಈ ಮಗುವಿನದ್ದಲ್ಲ ಅದು ಪೂರ್ವಜರ ರೋಗನಿರೋಧಕ ಶಕ್ತಿಯ ಅಂಶ ಅಂದರೆ ತಲೆತಲಾಂತರಗಳಲ್ಲಿ ಒಬ್ಬರಿಂದ ಇನ್ನೊ ಬ್ಬರಿಗೆ ತಗಲುವ ಐಬು ಅಥವಾ ಕಲ್ಮಶ ( miasm) ನ್ನು ಹೊಂದಿಕೊಂಡು ಹಲವು ತರಹದ ವೈವಿಧ್ಯಮಯ ಚಿನ್ಹೆಗಳಿಂದ ತೋರ್ಪಡಿಸುತ್ತದೆ. ಇವಕ್ಕೆ ಸಮಗುಣತ್ವವುಳ್ಳ ಔಷಧಿಯನ್ನು ಪ್ರಯೋಗಿಸಿದಾಗ ಈ ಖಾಯಿಲೆಯ ಮೂಲಸ್ವರೂಪವನ್ನೇ ಕಿತ್ತೊಗೆಯಬಹುದು. ಹೋಮಿಯೋಪಥಿ ಔಷಧಿಗಳಾದಂತಹ ars alb, puls, urtica urens, sulphur,apis ಮುಂತಾದ ಹಲವು ತರಹದ ಸಮಗುಣತ್ವವುಳ್ಳ ಔಷಧಿಗಳನ್ನು ಉಪಯೋಗಿಸಬಹುದು.
ಇನ್ನೊಂದು ಸರ್ವೇ ಸಾಮಾನ್ಯ ಖಾಯಿಲೆಯೆಂದರೆ ಶ್ವಾಸಕೋಶಕ್ಕೆ ಸಂಬಂಧಪಟ್ಟವು.
ಪದೇ ಪದೇ ಕಾಡುವಂತಹ ಶೀತ,ಸೀನು,ನೆಗಡಿ,ಕೆಮ್ಮು,ಕಫ,ದಮ್ಮು ಇತ್ಯಾದಿ.ಹವಾಮಾನದ ಬದಲಾವಣೆಯು ನೈಸರ್ಗಿಕವಾಗಿರಲಿ ಅಥವಾ ಕೃತಕವಾಗಿರಲಿ, ಅಹಾರಪದ್ಧತಿಯಿರಲಿ, ವೈರಾಣು ಅಥವಾ ಸೂಕ್ಷ್ಮಾಣುಗಳ ಸೋಂಕು ಇರಲಿ ದೇಹವು ಅದಕ್ಕೆ ಪ್ರತಿಸ್ಪಂದಿಸುತ್ತದೆ ಮತ್ತು ಹೊಂದಿಕೊಳ್ಳುತ್ತದೆ. ಆದಷ್ಟು ನೈಸರ್ಗಿಕವಾಗಿ ದೇಹದ ಹೊಂದಾಣಿಕೆಯಾದರೆ ಉತ್ತಮ. ವಿಶೇಷ ಔಷಧಿಯ ಪ್ರಯೋಗದ ಅವಶ್ಯಕತೆಯಿಲ್ಲ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಮತ್ತು ಸುಧೃಡರಾಗಿ ಬೆಳೆಯುತ್ತಾರೆ. ಒಂದು ವೇಳೆ ಇದು ಸಂಭವಿಸದಿದ್ದಲ್ಲಿ ದೇಹದಲ್ಲಿ ಏನೋ ನ್ಯೂನತೆ ಇದೆ ಎಂದು ತಿಳಿದುಬರುತ್ತದೆ. ಈ ನ್ಯೂನತೆ ವ್ಯಕ್ತಿಗತವಾಗಿರಬಹುದು ಅಥವಾ ಅನುವಂಶೀಯವಾಗಿರಬಹುದು. ಇದು ಮಯಾಸ್ಮ್ ಸಿದ್ಧಾಂತಕ್ಕೆ ಒಳಪಡುತ್ತದೆ. ಇದರಿಂದಾಗಿ ಯಾವುದು ತನ್ನಿಂತಾನಾಗಿ ಗುಣಮುಖವಾಗಬೇಕಿತ್ತೋ ಅದು ಇತರ ತೀವ್ರತಮ ಅನಾರೋಗ್ಯಕ್ಕೆ ಎಡೆಮಾಡಿಕೊಡಬಹುದು. ಉದಾಹರಣೆಗೆ ಉಬ್ಬಸ, ಶ್ವಾಸಕೋಶದ ಉರಿಊತ, ರುಮಾಟಿಕ್ ಸಂಧಿವಾತ ಇತ್ಯಾದಿ. ಇವುಗಳನ್ನು ತಡೆಗಟ್ಟಬೇಕಾದರೆ ಕೌಟಂಬಿಕ ಕಾಯಿಲೆಗಳ ಮಾಹಿತಿ, ತಾಯಿಯ ಆರೋಗ್ಯಸ್ಥಿತಿ, ಬಾಣಂತಿ ತೊಂದರೆಗಳು ಮತ್ತು ಮಗುವಿನ ವಿವಿಧ ಹಾವಭಾವಗಳು, ಇತರರೊಂದಿಗೆ ಪ್ರತಿಸ್ಪಂದಿಸುವ ಪರಿ ಇವೆಲ್ಲವುಗಳನ್ನು ಒಟ್ಟುಗೂಡಿಸಿ ಚಿನ್ಹೆಗಳ ಸಮೂಹ( totality of symptoms)ಕ್ಕೆ ಸಮಗುಣತ್ವವುಳ್ಳ ಹೋಮಿಯೋಪಥಿ ಔಷಧಿಯನ್ನು ಪ್ರಯೋಗಿಸಬೇಕು. ಇದು ಮಗುವನ್ನು ಪರಿಪೂರ್ಣವಾಗಿ ಗುಣಮುಖಗೊಳಿಸುತ್ತದೆ. ಹೋಮಿಯೋಪಥಿ ಔಷಧಿಗಳಾದಂತಹ ars alb,ant tart, puls,arum trif, allium cepa, spong, dros, samb ಮುಂತಾದ ಔಷಧಿಗಳ ಪ್ರಯೋಜನವನ್ನು ತಜ್ಞವೈದ್ಯರ ಸಲಹೆಯೊಂದಿಗೆ ಪಡೆಯಬಹುದು.
ಮಕ್ಕಳಲ್ಲಿ ಜಠರಕ್ಕೆ ಸಂಬಂಧ ಪಟ್ಟಂತೆ ಹಲವು ತೊಂದರೆಗಳು ಕಂಡುಬರುತ್ತವೆ.
ಹುಟ್ಟಿನಿಂದಲೂ ಮಗುವಿನ ಉತ್ತಮ ಆಹಾರ ತಾಯಿಯ ಹಾಲು. ಕೆಲವು ಮಕ್ಕಳಲ್ಲಿ ಈ ತಾಯ ಹಾಲು ಕೂಡ ಜೀರ್ಣಿಸಲು ಕಷ್ಟವಾಗುತ್ತದೆ. ಯಾವುದು ನೈಸರ್ಗಿಕವಾಗಿ ಸ್ರವಿಸಲ್ಪಡಬೇಕಾಗಿದ್ದು ಮತ್ತು ಹಾಲನ್ನು ಜೀರ್ಣಿಸಬೇಕೋ ಅದು ಸರಿಯಾಗಿ ಉತ್ಪತ್ತಿಯಾಗದಿದ್ದಲ್ಲಿ ಮಗುವು ಅತಿವಾಂತಿಬೇಧಿ ತೊಂದರೆಗೆ ಒಳಗೊಡಬಹುದು. ಅಂತಹ ಸಂದರ್ಭದಲ್ಲಿ ಸಮೂಹ ಚಿನ್ಹೆಗಳನ್ನು ಕಲೆಹಾಕಿ ಸೂಕ್ತ ಹೋಮಿಯೋಪಥಿ ಔಷಧಿಗಳಾದ aethusa, nat.carb, ನೀಡಬೇಕು. ಅಥವಾ ಯಾವುದೇ ಆಹಾರ ವಸ್ತುವಿನಿಂದ ಅಜೀರ್ಣ ಉಂಟಾಗಿ ಬೇಧಿಯಾದಾಗಲು ಮನೆಮದ್ದಿನಿಂದ ಶಮನವಾಗದಲ್ಲಿ ಅಥವಾ ಯಾವುದೇ ಸೂಕ್ಷಾಣು ಸೋಂಕುಗಳಲ್ಲಿ ಸಮೂಹಚಿನ್ಹೆಗಳಿಗನುಗುಣವಾಗಿ ಪರಿಣಾಮಕಾರಿ ಹೋಮಿಯೋಪಥಿ ಔಷಧಿಗಳಾದ verat.alb, nux vom, podophyllum, camphor, aloe,arg,nitr ಮುಂತಾದ ಔಷಧಿಗಳಲ್ಲಿ ಒಂದನ್ನು ತಜ್ಞ ವೈದ್ಯರ ಸಲಹೆಯೊಂದಿಗೆ ಕೊಡಬಹುದು.ಮಕ್ಕಳಲ್ಲಿ ಕಂಡುಬರುವಂತಹ ಹುಳ ಅಥವಾ ಕ್ರಿಮಿ ಉಪದ್ರವಗಳಿಗೆ cina,santonin, chinopod, teucreum ಇತ್ಯಾದಿ ಔಷಧಿಗಳು ಬಹು ಪ್ರಯೋಜನಕಾರಿ.
ಬಾಲಗ್ರಹ ಪೀಡೆಗಳಲ್ಲಿ ಹೋಮಿಯೋಪಥಿಯು ವಿಶೇಷತೆಯನ್ನು ಪಡೆದಿದೆ. ಒಮ್ಮೆಗೇ ಬೆಚ್ಚಿಬೀಳುವುದು, ಹೆದರುವುದು, ಕಿರಿಚಿಕೊಳ್ಳುವುದು, ರಚ್ಚೆ ಹಿಡಿಯುವುದು, ಹಟಮಾರಿತನದಿಂದ ವರ್ತಿಸುವುದು, ಜಡಹಿಡಿದಂತೆ ನಿರಾಸಕ್ತವಾಗಿರುವುದು, ಇತ್ಯಾದಿ ಮಾನಸಿಕ ಅತಿರೇಕಗಳಿಗೆ chamomilla, ignatia, cina, aconite, puls, baryta,calcarea, borax ಇತ್ಯಾದಿ ಔಷಧಿಗಳ ಪ್ರಯೋಜನವನ್ನು ಪಡೆಯಬಹುದು. ಮನೋದೈಹಿಕ ತೊಂದರೆಗಳಾದ ನಿದ್ದೆಯಲ್ಲಿ ಉಚ್ಚೆ, ನಿದ್ದೆಯಲ್ಲಿ ಮಾತನಾಡುವುದು, ಒತ್ತಡನಿಭಾಯಿಸುವ ಪರಿಸ್ಥಿತಿಗಳಿಂದ ಉಂಟಾಗುವ ದೈಹಿಕ ಕ್ಲೇಶಗಳು, ಸೋಂಕುನಿರೋಧಕ ಕ್ಷೀಣುಸುವಿಕೆ ಇವೆಲ್ಲವನ್ನೂ ಹೋಮಿಯೋಪಥಿಯಲ್ಲಿ ಯಶಸ್ವಿಯಾಗಿ ಗುಣಪಡಿಸಬಹುದು.